ನಂಬಿ ಕೆಟ್ಟವರಿಲ್ಲವೊ

ಶ್ರೀ ವ್ಯಾಸರಾಯರು

ನಂಬಿ ಕೆಟ್ಟವರಿಲ್ಲವೊ ರಂಗಯ್ಯನ

ನಂಬದೆ ಕೆಟ್ಟರೆ ಕೆಡಲಿ || ಪ ||

ಅಂಬುಜನಾಭನ ಅಖಿಲ ಲೋಕೇಶನ

ಕಂಬುಕಂಧರ ಕೃಷ್ಣ ಕರುಣಾಸಾಗರನ || ಅ ||

ತರಳ ಪ್ರಹ್ಲಾದ ಸಾಕ್ಷಿ - ಸರಸಿಯೊಳಿದ್ದ

ಕರಿರಾಜನೊಬ್ಬ ಸಾಕ್ಷಿ

ಮರಣ ಕಾಲದಿ ಅಜಾಮಿಳ ಮಗನನು ಕರೆಯೆ

ಗರುಡನೇರಿ ಬಂದ ಗರುವರಹಿತನ || ೧ ||

ದೊರೆಯೂರು ಏರಬಂದ ಪುತ್ರನನ್ನು

ಕೊರಳ್ಹಿಡಿದ್ಹೊರಡಿಸಲು

ಅರಣ್ಯದೊಳಗವನಿದ್ದ ಸ್ಥಳದಲ್ಲಿ

ಭರದಿಂದೋಡಿ ಬಂದ ಭಕ್ತವತ್ಸಲನ || ೨ ||

ತರುಣಿ ದ್ರೌಪದಿ ಸೀರೆಯ ದುಶ್ಯಾಸನ

ಸರಸರ ಸೆಳೆಯುತಿರೆ

ಕರುಣಿ ತನ್ನೊಡತಿಯೊಡನೆ ಆಡುವುದ ಬಿಟ್ಟು

ತ್ವರದಿ ಅಕ್ಷಯವಿಟ್ಟ ಸಿರಿಕೃಷ್ಣರಾಯನ || ೩ ||